ಭಾನುವಾರ, ಏಪ್ರಿಲ್ 26, 2015

ಕಾಲ

ಕಾಲವೊಂದು  ಬ್ರೇಕ್ ಇರದ ವಾಹನ
ಎಷ್ಟು ಚಲಿಸಿದರು ಮುಗಿಯದೀ ಇಂಧನ

ಪ್ರತಿಯೊಬ್ಬರೂ ಪ್ರಯಾಣಿಕರಿಲ್ಲಿ
ಹರುಷದಿ ಹತ್ತುವವರೆ ಎಲ್ಲರೂ
ಕೆಳಗಿಳಿಯಲೇಬೇಕು ಬಂದಾಗ ಅವರ ಊರು

ನೆಲೆಯೂರಲು ಆಸನಗಳುಂಟು
ಕೆಲವರಿಗೆ ನಿಂತು ಕಾಯುವ ವ್ಯವಧಾನವುಂಟು
ಕೆಲವರಿಗೆ ಹತ್ತಿದಾಗಲೇ ಹಲವು ವ್ಯಸನಗಳುಂಟು
ಇನ್ನು ಕೆಲವರಿಗೆ ಕಾಯ್ದಿರಿಸಿದ ಆಸನಗಳುಂಟು

ಕಾಲದ  ನೀತಿ ತಿಳಿದವರಿಲ್ಲ
ಎಲ್ಲಿ ಸೇರುವೆವು ಯಾರಿಗೂ ತಿಳಿದಿಲ್ಲ
ಚಾಲಕನೆಂಬ ಮಾಲೀಕ ಕರೆದೊಯ್ದ ಕಡೆ ಹೋಗಲೇಬೇಕು
ನಿರ್ವಾಹಕನು ಸೀಟಿ ಹೊಡೆದಾಗ ಇಳಿಯಲೇಬೇಕು

ಚೀಟಿ ಕೇಳಿ ಪಡೆಯಬಾರದು
ನಿರ್ವಾಹಕನು ಬರೆದು ಹರಿದು  ಕೊಟ್ಟ ಚೀಟಿಯೇ ಅಂತಿಮ
ಯಾಕೆಂದರೆ ಹಣೆ ಬರಹ  ಅಳಿಸಲಾಗದು
ಅವನ ಗಾಡಿ ಎಂದಿಗೂ ಹಿಂದೆ ಸಾಗದು

ಮಳೆಗೆ ಚಳಿಗೆ ಕಿಟಕಿ ಮುಚ್ಚಿ
ಬೇಸಿಗೆಯಲಿ ಕಿಟಕಿ ಬಿಚ್ಚಿ
ಆಸನದ ದಿಂಬಿಗೆ ತಲೆಯ ಹಚ್ಚಿ
ನಿದ್ರೆಯೆಂಬ ವಿಶ್ರಾಂತಿಯ ತಬ್ಬಿಬಿಡುವರು ಬಹಳ ಮಂದಿ

ಆ ಕಡೆ ಕಿಟಕಿಯಲ್ಲೊಬ್ಬ ಕುರುಡನು
ಹಿಂದಿನ ಕಿಟಕಿಯಲ್ಲೊಬ್ಬ ಕುಡುಕನು
ಮುಂದೆ ಕೂತವರಿಬ್ಬರು ಕುಂಟರು
ಹತ್ತಿರದಲ್ಲಿಬ್ಬರು ನೆಂಟರು
ಕಿಟಕಿಯಾಚೆ ತಲೆ ಹಾಕಿದವನು ತುಂಟನು

ಅಪ್ಪ ಅಮ್ಮ ಅಕ್ಕ ತಮ್ಮ
ಅಕ್ಕ ಪಕ್ಕ ಕೂತರು
ಅಜ್ಜಿ ತಾತ  ಊರು ಬಂತಾ  ?  ಎಂದು
ಆಗಾಗ ಕೇಳುತಿರುವರು
ಬಾಗಿಲ ಬಳಿಯೇ ಕುಳಿತಿರುವರು

ಆದಿ ಅಂತ್ಯ  ಎರಡೆ ಊರು
ಆದಿ ನಮ್ಮ ಊರು, ಅಂತ್ಯ ಬಲ್ಲವರು ಯಾರು ?
ಬರುವೆನೆಂದು ರಸ್ತೆಯಲಿ ಕೈಒಡ್ಧುವವರು  ನೂರು
ನಿರ್ವಾಹಕನು ಹತ್ತಿಸಿಕೊಂಡಿದ್ದು ಮಾತ್ರ ಹದಿನಾರು

ಹೆತ್ತವರು ಹೆತ್ತಾಗ ಇದನ್ನು ಏರಿದೆ
ನಿರ್ವಾಹಕನು ಸೀಟಿ ಹೊಡೆವಾಗ ಇಳಿವೆ
ಹಿಂತಿರುಗಿ ನೋಡದೆ ಕತ್ತಲೆಯಲಿ ಮನೆಯ ಕಡೆ ನಡೆವೆ
ಕೊನೆಗೆ ರೈಟ್ ರೈಟ್  ಎಂಬ ಪದ ಮಾತ್ರ ಕಿವಿಗೆ ಬಿದ್ದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ