ಶನಿವಾರ, ಆಗಸ್ಟ್ 22, 2015

ನಾ ನಿನ್ನ ಬಿಡೆ !

ಮೊದಲ ನೋಟದಲೀ  ನಾ ನಿನ್ನ ಅರಿಯಲಿಲ್ಲ
ಅದೇಕೋ ನನ್ನ ಮನಸು ನಿನ್ನ  ನೆನೆಯಲಿಲ್ಲ
ಆದರೂ  ಈ ಕಂಗಳು ನಿನ್ನ ಮರೆಯಲಿಲ್ಲ

ಕಾಲ ಕಳೆದು ಹೋಗುತಿದೆ
ನೀ ಮಾತ್ರ ಮನೆಯೊಳಗೆ ಕುಳಿತಿರುವೆ
ನಿನ್ನ ದೇಹವು ಮುದುಡಿ ಹೋಗಿದೆ

ನೆನಪಾಯಿತು  ನನಗೀಗ
ಈ ಸುಂದರ ಮಳೆಯಲಿ ನೆನೆದಾಗ ,
ನಿನ್ನ ಹೊರಗೆ ಕರೆದೊಯ್ಯಲೇ ?

ಎಷ್ಟು ಹುಡುಕಲಿ ನಿನ್ನ,
ಅಮ್ಮನ ಜೊತೆ  ಹೋಗಿರಬಹುದೇನೋ ?
ನನ್ನ  ಮೇಲೆ ತುಂಬ ಕೋಪವೇನೋ ?

ನನ್ನನು ಕ್ಷಮಿಸು , ಇನ್ನೆಂದಿಗೂ ಬಿಡುವುದಿಲ್ಲ ನಿನ್ನನು
ಆ ಮಳೆಯೆ ಒಂದು ಮಾಡಲಿ ನಮ್ಮನು

ನಾ ನಿನ್ನ ಕೈ ಹಿಡಿದು ನಡೆವೆ
ಯಾವುದೇ ಬಿರುಗಾಳಿಗೂ  ಅಂಜದೆ

ನಾನೆಂದಿಗೂ ನಿನ್ನ ಬಿಡೆ
ಏಕೆಂದರೆ ,
ನೀ ನಮ್ಮ ಮನೆಯಲ್ಲಿರುವ ಒಂದೇ ಒಂದು ಕೊಡೆ !

ಭಾನುವಾರ, ಏಪ್ರಿಲ್ 26, 2015

ಕಾಲ

ಕಾಲವೊಂದು  ಬ್ರೇಕ್ ಇರದ ವಾಹನ
ಎಷ್ಟು ಚಲಿಸಿದರು ಮುಗಿಯದೀ ಇಂಧನ

ಪ್ರತಿಯೊಬ್ಬರೂ ಪ್ರಯಾಣಿಕರಿಲ್ಲಿ
ಹರುಷದಿ ಹತ್ತುವವರೆ ಎಲ್ಲರೂ
ಕೆಳಗಿಳಿಯಲೇಬೇಕು ಬಂದಾಗ ಅವರ ಊರು

ನೆಲೆಯೂರಲು ಆಸನಗಳುಂಟು
ಕೆಲವರಿಗೆ ನಿಂತು ಕಾಯುವ ವ್ಯವಧಾನವುಂಟು
ಕೆಲವರಿಗೆ ಹತ್ತಿದಾಗಲೇ ಹಲವು ವ್ಯಸನಗಳುಂಟು
ಇನ್ನು ಕೆಲವರಿಗೆ ಕಾಯ್ದಿರಿಸಿದ ಆಸನಗಳುಂಟು

ಕಾಲದ  ನೀತಿ ತಿಳಿದವರಿಲ್ಲ
ಎಲ್ಲಿ ಸೇರುವೆವು ಯಾರಿಗೂ ತಿಳಿದಿಲ್ಲ
ಚಾಲಕನೆಂಬ ಮಾಲೀಕ ಕರೆದೊಯ್ದ ಕಡೆ ಹೋಗಲೇಬೇಕು
ನಿರ್ವಾಹಕನು ಸೀಟಿ ಹೊಡೆದಾಗ ಇಳಿಯಲೇಬೇಕು

ಚೀಟಿ ಕೇಳಿ ಪಡೆಯಬಾರದು
ನಿರ್ವಾಹಕನು ಬರೆದು ಹರಿದು  ಕೊಟ್ಟ ಚೀಟಿಯೇ ಅಂತಿಮ
ಯಾಕೆಂದರೆ ಹಣೆ ಬರಹ  ಅಳಿಸಲಾಗದು
ಅವನ ಗಾಡಿ ಎಂದಿಗೂ ಹಿಂದೆ ಸಾಗದು

ಮಳೆಗೆ ಚಳಿಗೆ ಕಿಟಕಿ ಮುಚ್ಚಿ
ಬೇಸಿಗೆಯಲಿ ಕಿಟಕಿ ಬಿಚ್ಚಿ
ಆಸನದ ದಿಂಬಿಗೆ ತಲೆಯ ಹಚ್ಚಿ
ನಿದ್ರೆಯೆಂಬ ವಿಶ್ರಾಂತಿಯ ತಬ್ಬಿಬಿಡುವರು ಬಹಳ ಮಂದಿ

ಆ ಕಡೆ ಕಿಟಕಿಯಲ್ಲೊಬ್ಬ ಕುರುಡನು
ಹಿಂದಿನ ಕಿಟಕಿಯಲ್ಲೊಬ್ಬ ಕುಡುಕನು
ಮುಂದೆ ಕೂತವರಿಬ್ಬರು ಕುಂಟರು
ಹತ್ತಿರದಲ್ಲಿಬ್ಬರು ನೆಂಟರು
ಕಿಟಕಿಯಾಚೆ ತಲೆ ಹಾಕಿದವನು ತುಂಟನು

ಅಪ್ಪ ಅಮ್ಮ ಅಕ್ಕ ತಮ್ಮ
ಅಕ್ಕ ಪಕ್ಕ ಕೂತರು
ಅಜ್ಜಿ ತಾತ  ಊರು ಬಂತಾ  ?  ಎಂದು
ಆಗಾಗ ಕೇಳುತಿರುವರು
ಬಾಗಿಲ ಬಳಿಯೇ ಕುಳಿತಿರುವರು

ಆದಿ ಅಂತ್ಯ  ಎರಡೆ ಊರು
ಆದಿ ನಮ್ಮ ಊರು, ಅಂತ್ಯ ಬಲ್ಲವರು ಯಾರು ?
ಬರುವೆನೆಂದು ರಸ್ತೆಯಲಿ ಕೈಒಡ್ಧುವವರು  ನೂರು
ನಿರ್ವಾಹಕನು ಹತ್ತಿಸಿಕೊಂಡಿದ್ದು ಮಾತ್ರ ಹದಿನಾರು

ಹೆತ್ತವರು ಹೆತ್ತಾಗ ಇದನ್ನು ಏರಿದೆ
ನಿರ್ವಾಹಕನು ಸೀಟಿ ಹೊಡೆವಾಗ ಇಳಿವೆ
ಹಿಂತಿರುಗಿ ನೋಡದೆ ಕತ್ತಲೆಯಲಿ ಮನೆಯ ಕಡೆ ನಡೆವೆ
ಕೊನೆಗೆ ರೈಟ್ ರೈಟ್  ಎಂಬ ಪದ ಮಾತ್ರ ಕಿವಿಗೆ ಬಿದ್ದಿದೆ.

ಶನಿವಾರ, ಫೆಬ್ರವರಿ 14, 2015

ಸಿಗರೇಟು

ಎಸ್ಟೇ  ಏರಿದರೂ ಇದರ ರೇಟು
ಜೇಬಿನಿಂದ ಬರುವುದು ಚಿಲ್ಲರೆ ನೋಟು
ಧೂಮಪಾನಿಗಳು ಬಿಡುವುದಿಲ್ಲ ಈ ಸಿಗರೇಟು 

ಶನಿವಾರ, ಜನವರಿ 24, 2015

ಅಲ್ಪ ಮನುಜರು ನಾವು

ಭಾನೆತ್ತರಕ್ಕೆ ಬಯಕೆ ಇಟ್ಟು
ಭುವಿಯಂಗಳದಿ ಮನೆಯ ಕಟ್ಟಿ
ಮನಸ್ಸಾಗರದಿ ಮುಳುಗುವ
ಅಲ್ಪ ಮನುಜರು ನಾವು

ಭಾನ ಆಚೆ ಹಾರಾಡಿ
ಭುವಿಯ ಒಳಗೆ ಓಡಾಡಿ
ನಮ್ಮೊಳಗೇ ಹೊಡೆದಾಡುವ
ಅಲ್ಪ ಮನುಜರು ನಾವು

ಗಟ್ಟಿ ದೇಹ, ಪುಟ್ಟ ಹೃದಯ
ಗೊತ್ತು ಗುರಿಯಿರದ ಕನಸುಗಳು
ಸಣ್ಣ ಕಣ್ಣು, ದೊಡ್ಡ ದೃಷ್ಟಿ
ಆಸರೆಯಾಗದ  ಆಸೆಗಳಿರುವ
ಅಲ್ಪ ಮನುಜರು ನಾವು


ಪ್ರೀತಿ, ಪ್ರೇಮ, ಮಂಜು ಹನಿ

ಒಲವು ಹರಿವ ಜಾಗದಲ್ಲಿ
ಮೊಗ್ಗು ಅರಳುವ ಸಮಯದಲ್ಲಿ
ಪ್ರೇಮವೆಂಬ ಕಿರಣ ಚೆಲ್ಲಿ
ಪ್ರೀತಿಯೆಂಬ ಗುಲಾಬಿ ಅರಳಿದೆ

ಹಸಿರ ಹುಲ್ಲಿನ ರಾಶಿಯ ನಡುವೆ
ಮಂಜು ಹನಿಯ ಬಿಂದುವು ಅದುವೆ
ಸೂರ್ಯ ರಶ್ಮಿ  ಹರಿದು ಒಳಗೆ
ಕರಗಿ ಹೋಯಿತು ಪ್ರೀತಿಯೆಂಬ ಬಿಂದುವೊಳಗೆ

ಪ್ರೀತಿಯೆಂಬ ಅಸ್ತ್ರದಲ್ಲಿ
ಪ್ರೇಮವೆಂಬ  ಯುದ್ದ ಮಾಡಿ
ಮನಸೆಂಬ ಹೂದೋಟದಲಿ
ಹೂಗಳೆಂಬ ಯೋಧರು
ಪರಿಮಳವ  ಬೀರುತಿಹರು



ನನ್ನ ಗೆಳೆಯ ಮತ್ತು ಅವರಿಬ್ಬರ ಪ್ರೀತಿ

ಅದು ನಮ್ಮಿಬ್ಬರ ಕಾಲೇಜು ದಿನಗಳು
ಮತ್ತು
ಅದು ಅವರಿಬ್ಬರು ಪ್ರೀತಿಸಿದ ದಿನಗಳು

ಆರಂಭದ ದಿನಗಳಲೇ ಮೂಡಿದ ಪ್ರೇಮವದು
ಆ ವರನಿಗೆ ಅವಳೇ ಸರಿಯಾದ ವಧು

ವರುಷಗಳಲೇ ಪ್ರೇಮ ರಾಗ ಹಾಡಿ ಹಾಡಿದೆ
ಹರುಷವೊಂದು ಮನಸುಗಳಲಿ  ನಲಿದಾಡಿದೆ

ವರುಷವೆಲ್ಲ ದಿನಗಳಾಗಿ
ದಿನಗಳೆಲ್ಲ  ಕ್ಷಣಗಳಾಗಿ
ಕ್ಷಣಗಳೆಲ್ಲ ಕಣಗಳಾಗಿ
ಎಲ್ಲ ಪ್ರೀತಿಮಯವಾಗಿವೆ

ಕಡಿಮೆಯಾಯಿತು  ಗೆಳೆಯನ ಜೊತೆ ಓಡಾಟ
ಅವನ ಜೀವನವೇ ಆಯಿತು ಅವಳ ಒಡನಾಟ

ಹುಟ್ಟು ಸಾವುಗಳನೆ ಮರೆತರಿವರು
ಎಲ್ಲವನ್ನು  ಬದಿಗೆ  ಇಟ್ಟು
ಮನದ ತುಂಬ ಪ್ರೀತಿಯ
ಬೆಳದಿಂಗಳ ಬಿಟ್ಟು

ಮುಗಿದವು ಕಾಲೇಜು ದಿನಗಳು
ನಲುಗಿದವು ಪ್ರೇಮಿಗಳ  ಮನಗಳು
ದಿನಗಳ ಬಳಿಕ ಸಿಗುವೆನೆಂದವಳು ಸಿಗಲಿಲ್ಲ
ಅವಳಿಗಾಗಿ ಇವನೆಸ್ಟು ದಿನ ಕಾಯಲಿಲ್ಲ

ಕೊರೆವ ಚಳಿಯಲಿ
ಸುಡುವ ಬಿಸಿಲಲಿ
ಸುರಿವ ಮಳೆಯಲಿ
ಎಲ್ಲೂ  ಕಾಣಿಸಲಿಲ್ಲ ಅವಳು

ಹೀಗೆ ಸರಿಯಿತು  ಸಮಯ
ಹಾಗೆ ತಿಳಿಯಿತು ವಿಷಯ
ಅದು ಅವನ ಪಾಲಿಗೆ ವಿಷದ ವಿಷಯ
ವಿಷಾದದ ವಿಷಯ

ಅವಳ ಮದುವೆ ನಡೆದು ಹೋಗಿತ್ತು
ಇದ ಕೇಳಿ ಇವನ ಹೃದಯ ಒಡೆದು ಹೋಗಿತ್ತು

ಇದೀಗ ಇವರ ಪ್ರೇಮ ಚಕ್ರ ನಿಂತಿದೆ
ಆದರೆ ಕಾಲ ಚಕ್ರ  ತಿರುಗುತ್ತಲೇ  ಇದೆ

ಹಲವು ವರುಷಗಳು ಕಳೆಯಿತು
ಒಡೆದು ಹೋದ ಮನಸು ಧೃಡವಾಯಿತು

ಹಿರಿಯರು ಹೊಸ ಹುಡುಗಿಯ ಹುಡುಕಿದರು
ಅವನಿಗೆ ಮದುವೆ  ಮಾಡಿದರು

ಅಂತು ಇಂತು ಎಲ್ಲ ಮುಗಿದು
ಇವರಿಬ್ಬರು ಸಪ್ತಪದಿ  ತುಳಿದು
 ಇವರ ಪ್ರೀತಿಯ ರಥ ಮುಂದೆ ಸಾಗುತಿದೆ ..... 
                                                           ( ಹಲವು ವರುಷಗಳ ಬಳಿಕಮುಂದುವರೆಯುವುದು ....!)